
KSRTC Service: ತತ್‌ಕ್ಷಣಕ್ಕೆ ಬಸ್ ದರ ಹೆಚ್ಚಳ ಇಲ್ಲ: ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ತತ್‌ಕ್ಷಣಕ್ಕೆ ಬಸ್ ದರ ಹೆಚ್ಚಳ ಮಾಡುವ ಪ್ರಸ್ತಾವ ಸಾರಿಗೆ ಸಂಸ್ಥೆಯ ಮುಂದೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಕೆಎಸ್ಸಾರ್ಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳ ಬಸ್ ದರ ಹೆಚ್ಚಳ ಕುರಿತಂತೆ “ಉದಯವಾಣಿ’ ಜತೆ ಅವರು ಮಾತನಾಡಿ, ಸದ್ಯಕ್ಕಂತೂ ಯಾವುದೇ ರೀತಿಯಲ್ಲಿ ಬಸ್ ಪ್ರಯಾಣ ದರ ಏರಿಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಸಾರಿಗೆ ಸಂಸ್ಥೆಗಳ ನಿಗಮಗಳು ಬಸ್ ದರ ಹೆಚ್ಚಳ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ ಈಗ ಹೊಸದಾಗಿ ಅಂತಹ ಯಾವುದೇ ರೀತಿಯ ದರ ಏರಿಕೆ ಬಗ್ಗೆ ಪ್ರಸ್ತಾವನೆಯನ್ನು ಸಾರಿಗೆ ಸಂಸ್ಥೆಯ ನಿಗಮಗಳು ಸಲ್ಲಿಸಿಲ್ಲ ಎಂದು ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.
ಬಸ್ ದರ ಹೆಚ್ಚಳ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಬೇಕು. ಸರಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಸಭೆ ಬಸ್ ದರ ಹೆಚ್ಚಳ ಬಗ್ಗೆ ಶಿಫಾರಸು ಮಾಡಿದೆ. ಆದರೆ ದರ ಹೆಚ್ಚಳವನ್ನು ಸಾರಿಗೆ ಸಂಸ್ಥೆ ನಿರ್ಧಾರ ಮಾಡುವುದಿಲ್ಲ. ಇದನ್ನು ಸಾರಿಗೆ ನಿಗಮ ಮಂಡಳಿ ಸಭೆಯಲ್ಲಿ ಚರ್ಚೆ ಮಾಡಿಯೇ ಸರಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.