
ವಿಟ್ಲ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಗಡಿಯಾರ ಜೋಗಿಬೆಟ್ಟು ಎಂಬಲ್ಲಿ ದ್ವಿಚಕ್ರವಾಹನ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರವಾಹನದಲ್ಲಿದ್ದ ಬಾಲಕ ಮೃತಪಟ್ಟು, ದಂಪತಿ ಗಾಯಗೊಂಡಿರುವ ಅವಘಡ ಇಂದು ರವಿವಾರ(ಡಿ29) ಸಂಭವಿಸಿದೆ.
ಬೆಳ್ತಂಗಡಿ ಗರ್ಡಾಡಿ ಮರಕ್ಕಿಣಿ ನಿವಾಸಿ ಶಾಝಿನ್ (6) ಮೃತ ದುರ್ದೈವಿ ಬಾಲಕ ಎಂದು ತಿಳಿದು ಬಂದಿದೆ.
ಬೈಕ್ ನಲ್ಲಿ ಹಸನಬ್ಬ ಬ್ಯಾರಿ ಪತ್ನಿ ನಸೀಮಾ ಹಾಗೂ ಪುತ್ರ ಶಾಝಿನ್ ಕಲ್ಲಡ್ಕದಿಂದ ಉಪ್ಪಿನಂಗಡಿ ಕಡೆಗೆ ಹೋಗುತ್ತಿರುವಾಗ ಉಪ್ಪಿನಂಗಡಿ ಕಡೆಯಿಂದ ಬಂದ ಲಾರಿ ಢಿಕ್ಕಿಯಾಗಿದೆ.
ಮೂವರು ಬೈಕ್ ಸಮೇತ ಬಿದ್ದಿದ್ದು ಗಂಭೀರ ಗಾಯಗಳಾಗಿವೆ. ಸಾರ್ವಜನಿಕರು ನೆರವಿಗೆ ಧಾವಿಸಿ ಶಾಝಿನ್ನನ್ನು ಚಿಕಿತ್ಸೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಗಾಯಗೊಂಡ ಸಲೀಂ ಮತ್ತು ನಸೀಮಾ ಅವರನ್ನು ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.