Fri. Mar 14th, 2025

ಮೈಕ್ರೋ ಫೈನಾನ್ಸ್ ಕಂಪನಿ ಹಾವಳಿ ತಡೆಗೆ ಕಾನೂನು: ಸುಗ್ರೀವಾಜ್ಞೆ ಕರಡು ಮುಖ್ಯಮಂತ್ರಿಗೆ ರವಾನೆ
ಗದಗ: ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಸಾಲ ಪಡೆಯುವವರನ್ನು ರಕ್ಷಿಸುವ ಸುಗ್ರೀವಾಜ್ಞೆಯ ಕರಡು ಸಿದ್ಧವಾಗಿದ್ದು, ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಮೋದನೆಗಾಗಿ ಕಳುಹಿಸಲಾಗಿದೆ ಎಂದು ಕಾನೂನು ಸಚಿವ ಎಚ್‌ಕೆ ಪಾಟೀಲ್ ಭಾನುವಾರ ಹೇಳಿದ್ದಾರೆ.

ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ ನಂತರ ಸುಗ್ರೀವಾಜ್ಞೆಯನ್ನು ರಾಜ್ಯಪಾಲರ ಅನುಮೋದನೆಗಾಗಿ ಕಳುಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಕಂಪನಿಗಳು ಅಮಾನವೀಯ ರೀತಿಯಲ್ಲಿ ಸಾಲಗಾರರಿಂದ ಹಣವನ್ನು ವಸೂಲಿ ಮಾಡುತ್ತಿದ್ದು, ಅಪಾರ ಹಿಂಸೆ ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಕಿರುಕುಳ ತಡೆಗಟ್ಟಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಕರಡು ಸಿದ್ಧಪಡಿಸಿದೆ. ಅದನ್ನು ಪರಿಶೀಲನೆಗಾಗಿ ಮುಖ್ಯಮಂತ್ರಿಗೆ ಕಳುಹಿಸಲಾಗಿದೆ.ಅವರು ಒಪ್ಪಿಗೆ ನೀಡಿದ ನಂತರ ರಾಜ್ಯಪಾಲರಿಗೆ ಕಳುಹಿಸಲಾಗುವುದು ಎಂದು ಪಾಟೀಲ್ ಹೇಳಿದರು.

ಮೈಕ್ರೋ ಫೈನಾನ್ಸ್ ಕಂಪನಿಗಳ ಏಜೆಂಟರ ದುಷ್ಕೃತ್ಯಗಳಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಹಲವಾರು ಮಂದಿ ಆತ್ಮಹತ್ಯೆಗೆ ಶರಣಾಗಿದ್ದರೆ, ಮತ್ತೆ ಕೆಲವರು ಮನೆ ಬಿಟ್ಟು ಬೇರೆಡೆಗೆ ಓಡಿ ಹೋಗಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಈ ಕಂಪನಿಗಳು ಸಾಲ ವಸೂಲಾತಿಗಾಗಿ ಗೂಂಡಾಗಳನ್ನು ನೇಮಿಸಿಕೊಳ್ಳುವ ಮೂಲಕ ಬಡವರಿಗೆ ಕಿರುಕುಳ ನೀಡುತ್ತಿವೆ ಎಂದು ಈ ಹಿಂದೆ ಮುಖ್ಯಮಂತ್ರಿ ಹೇಳಿದ್ದರು.

Leave a Reply

Your email address will not be published. Required fields are marked *