Sat. Mar 15th, 2025 11:07:30 PM
🅾ತಲಪಾಡಿ ಕೆ.ಸಿ.ರೋಡ್: ಸಹಕಾರಿ ಸಂಘದಿಂದ ನಗನಗದು ದರೋಡೆ

ಉಳ್ಳಾಲ: ಕೋಟೆಕಾರ್ ಸಹಕಾರಿ ಸಂಘದ ತಲಪಾಡಿ ಕೆ.ಸಿ.ರೋಡ್ ಶಾಖೆಗೆ ನುಗ್ಗಿದ ದರೋಡೆಕೋರರು ಸಿಬ್ಬಂದಿಯನ್ನು ಬೆದರಿಸಿ ಭಾರೀ ಪ್ರಮಾಣದ ನಗ-ನಗದು ದರೋಡೆಗೈದು ಪರಾರಿಯಾದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿರುವುದು ವರದಿಯಾಗಿದೆ.

ಕಾರೊಂದರಲ್ಲಿ ಬಂದ ಐವರು ಮುಸುಕುಧಾರಿಗಳ ತಂಡ ಬ್ಯಾಂಕ್ ಸಿಬ್ಬಂದಿಗೆ ಬಂದೂಕು ಹಾಗೂ ತಲವಾರು ತೋರಿಸಿ ಬೆದರಿಸಿ ಈ ದರೋಡೆ ನಡೆಸಿದೆ.

ದರೋಡೆಕೋರರು ಬ್ಯಾಂಕಿನಲ್ಲಿದ್ದ ಮೂವರು ಮಹಿಳಾ ಸಿಬ್ಬಂದಿ ಹಾಗೂ ಓರ್ವ ಪುರುಷ ಸಿಬ್ಬಂದಿ ಮತ್ತೋರ್ವ ಸಿಸಿಟಿವಿ ದುರಸ್ತಿಗೆ ಬಂದಿದ್ದ ಟೆಕ್ನಿಷಿಯನ್ ಅವರಿಗೆ ಬಂದೂಕು ಹಾಗೂ ತಲವಾರು ತೋರಿಸಿ ಬೆದರಿಸಿದ್ದಾರೆ. ಬಳಿಕ ಬ್ಯಾಂಕ್ ಲಾಕರ್ ನಲ್ಲಿದ್ದ ಕೋಟ್ಯಂತರ ರೂ. ಮೌಲ್ಯದ ಚಿನ್ನ ಹಾಗೂ ಲಕ್ಷಾಂತರ ರೂ. ನಗದು ದೋಚಿ ಕಾರಿನಲ್ಲಿ ಪರಾರಿಯಾಗಿದ್ದಾರೆ.

ಓಡಿಬಂದ ವಿದ್ಯಾರ್ಥಿಗಳು

ಬ್ಯಾಂಕ್ ಸಿಬ್ಬಂದಿಯ ಬೊಬ್ಬೆ ಕೇಳಿ ಬ್ಯಾಂಕ್ ಕೆಳಗಿನ ಬೇಕರಿಯಲ್ಲಿದ್ದ ವಿದ್ಯಾರ್ಥಿಗಳು ಮೊದಲ ಮಹಡಿಯಲ್ಲಿರುವ ಬ್ಯಾಂಕಿನತ್ತ ಓಡಿದ್ದಾರೆ. ಈ ವೇಳೆ ದರೋಡೆಕೋರರು ವಿದ್ಯಾರ್ಥಿಗಳನ್ನು ಬೆದರಿಸಿದ್ದಾರೆ. ಪ್ರತ್ಯಕ್ಷದರ್ಶಿ ವಿದ್ಯಾರ್ಥಿಗಳಲ್ಲಿ ಆಗಂತುಕರು ಕನ್ನಡದಲ್ಲಿ ಮಾತನಾಡಿದ್ದರೆ, ಬ್ಯಾಂಕ್ ಸಿಬ್ಬಂದಿ ಜೊತೆ ಹಿಂದಿ ಭಾಷೆಯಲ್ಲಿ ಸಂಭಾಷಣೆ ನಡೆಸಿದ್ದರು ಎಂದು ತಿಳಿದುಬಂದಿದೆ.

ಇಂದು ಬ್ಯಾಂಕಿನ ಸಿಸಿಟಿವಿ ಕ್ಯಾಮರಾ ದುರಸ್ತಿಗೆಂದು ತಂತ್ರಜ್ಞರೊಬ್ಬರು ಆಗಮಿಸಿದ್ದರು. ಸಿಸಿಟಿವಿ ತಂತ್ರಜ್ಞರ ಬೆರಳಿನಲ್ಲಿದ್ದ ಉಂಗುರವನ್ನುಕೂಡಾ ಬಲಾತ್ಕಾರವಾಗಿ ದೋಚಿರುವ ದರೋಡೆಕೋರರು ಬ್ಯಾಂಕ್ ಲಾಕರ್ ನಿಂದ ದೋಚಿದ ಚಿನ್ನ ಹಾಗೂ ನಗದನ್ನು ಗೋಣಿಯಲ್ಲಿ ತುಂಬಿಸಿ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಧಾನಸಭಾಧ್ಯಕ್ಷರ ಭೇಟಿ

ಕೃತ್ಯ ಸ್ಥಳಕ್ಕೆ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಭೇಟಿ ನೀಡಿ ಸಿಬ್ಬಂದಿಯಿಂದ ಮಾಹಿತಿ ಪಡೆದರು ಅಲ್ಲದೆ ಎಸಿಪಿಯಿಂದ ತನಿಖೆಯ ವಿವರವನ್ನು ಪಡೆದರು. ದರೋಡೆಕೋರರ ಶೀಘ್ರ ಪತ್ತೆಗೆ ಕ್ರಮಕೈಗೂಳ್ಳುವಂತೆ ಸೂಚಿಸಿದರು.

ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಉಳ್ಳಾಲ ಪೋಲಿಸರ ತಂಡ ಭೇಟಿ ನೀಡಿದೆ.

Leave a Reply

Your email address will not be published. Required fields are marked *