Sat. Mar 15th, 2025
10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು

10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು
ರಾಜಸ್ಥಾನ: ಕಳೆದ ಸೋಮವಾರ(ಡಿ.23) ರಾಜಸ್ಥಾನದ ಕೊಟ್‌ಪುಟ್ಲಿಯಲ್ಲಿ ತಂದೆಯ ಜೊತೆ ತೋಟಕ್ಕೆ ಹೋಗಿದ್ದ ವೇಳೆ ಆಯತಪ್ಪಿ 150 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕಿಯನ್ನು ಹತ್ತು ದಿನದ ಕಾರ್ಯಾಚರಣೆ ಬಳಿಕ ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ.

ಕಳೆದ ಹತ್ತು ದಿನಗಳಿಂದ ರಕ್ಷಣಾ ತಂಡ ಬಾಲಕಿಯ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು ಹತ್ತನೇ ದಿನವಾದ ಇಂದು ಬಾಲಕಿಯನ್ನು ಕೊಳವೆ ಬಾವಿಯಿಂದ ಮೇಲಕ್ಕೆ ತೆಗೆದು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಈ ವೇಳೆ ಪರಿಶೀಲಿಸಿದ ವೈದ್ಯರು ಬಾಲಕಿಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದ್ದಾರೆ. ಸದ್ಯ ತೀವ್ರ ನಿಗಾ ಘಟಕದಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮೂರೂ ವರ್ಷದ ಬಾಲಕಿ ಚೇತನಾ ಕಳೆದ ಸೋಮವಾರ(ಡಿ.23) ತನ್ನ ತಂದೆಯ ಜೊತೆಯಲ್ಲಿ ಜಮೀನಿಗೆ ಹೋಗಿದ್ದ ವೇಳೆ ಸುಮಾರು 700 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಾಳೆ, ಬಾಲಕಿ ಕೊಳವೆ ಬಾವಿಗೆ ಬಿದ್ದಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಬಾಲಕಿಯ ರಕ್ಷಣಾ ಕಾರ್ಯಾಚರಣೆ ನಡೆಸಲು ಜಿಲ್ಲಾಡಳಿತ ಮುಂದಾಗಿದೆ, ಸ್ಥಳಕ್ಕೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸೇರಿದಂತೆ ಅಧಿಕಾರಿಗಳು ಮತ್ತು ರಕ್ಷಣಾ ತಂಡಗಳು ದೌಡಾಯಿಸಿ ಕಳೆದ ಹತ್ತು ದಿನಗಳಿಂದ ಬಾಲಕಿಯನ್ನು ಸುರಕ್ಷಿತವಾಗಿ ಹೊರತರಲು ಅವಿರತ ಶ್ರಮ ನಡೆಸಿದೆ. ಅಲ್ಲದೆ ಬಾಲಕಿಯ ಪೋಷಕರು, ಗ್ರಾಮಸ್ಥರು ಸೇರಿದಂತೆ ಹಲವು ಮಂದಿ ಬಾಲಕಿ ಬದುಕಿ ಬರಲಿ ಎಂದು ದೇವರಲ್ಲಿ ವಿಶೇಷ ಪೂಜೆಯನ್ನು ನಡೆಸಿದ್ದರು ಕೊನೆಗೂ ಪೋಷಕರ, ಗ್ರಾಮಸ್ಥರ ಮೊರೆಗೆ ದೇವರು ಕರುಣೆ ತೋರಿದ್ದಾರೆ.
ಆಸ್ಪತ್ರೆ ವೈದ್ಯರು ಮಗು ಬದುಕುಳಿದಿರುವ ವಿಚಾರ ತಿಳಿಸುತ್ತಿದ್ದಂತೆ ಆಸ್ಪತ್ರೆ ಬಳಿ ನೆರೆದಿದ್ದ ಜನರು ಇದು ಪವಾಡವೇ ಸರಿ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *