Fri. Mar 14th, 2025
ಮೃತ ಮೂಸಾ ಶರೀಫರ ಕುಟುಂಬದವರಿಗೆ ಸಾಂತ್ವನ ಹೇಳಲು ಗಾಯಾಳುಗಳ ಯೋಗಕ್ಷೇಮ ವಿಚಾರಿಸಲು KRS ಪಕ್ಷ ಭೇಟಿ

ಮೂರು ವಾರಗಳ ಹಿಂದೆ (11-12-2024) ಗುಜರಾತಿನ ಭರೂಚ್ ಜಿಲ್ಲೆಯಲ್ಲಿ ನಡೆದ ಆಕಸ್ಮಿಕ ಅಪಘಾತದ ದುರ್ಘಟನೆಯಲ್ಲಿ KRS ಪಕ್ಷದ ಕಾರ್ಯಾಧ್ಯಕ್ಷರಾಗಿದ್ಧ ಲಿಂಗೇಗೌಡ ಎಸ್.ಎಚ್.ರೊಂದಿಗೆ ಸ್ಥಳದಲ್ಲಿಯೇ ಮರಣಿಸಿದವರು ಬೆಳ್ತಂಗಡಿಯ ಮೂಸಾ ಶರೀಫ್. ಅವರಿಗೆ ಮೂವರು ಹೆಣ್ಣುಮಕ್ಕಳು ಮತ್ತು ಮಗ ಇದ್ದಾರೆ; ನಾಲ್ವರೂ ಅಪ್ರಾಪ್ತ ವಯಸ್ಕರು. ಮೂಸಾರ ಶ್ರೀಮತಿ ಗೃಹಿಣಿ. ಕುಟುಂಬದಲ್ಲಿ ದುಡಿಯುತ್ತಿದ್ದ ಏಕೈಕ ವ್ಯಕ್ತಿ ಮೂಸಾ ಶರೀಫ್.

ಮಹಿಳೆಯರ ಮೇಲಿನ ಲೈಂಗಿಕ ದರ್ಜುನ್ಯದ ಪ್ರಕರಣಗಳು ತ್ವರಿತವಾಗಿ ವಿಲೇವಾರಿಯಾಗಿ ಅಪರಾಧಿಗಳಿಗೆ ಬಹುಬೇಗನೆ ಕಠಿಣ ಶಿಕ್ಷೆಯಾಗುವ ನಿಟ್ಟಿನಲ್ಲಿ ಕಾನೂನು ರೂಪಿಸಿ ಎಂದು ದೇಶದ ಪ್ರಧಾನಿ ಮತ್ತು ರಾಷ್ಟ್ರಪತಿಗಳನ್ನು ಆಗ್ರಹಿಸಲು ಮಂಗಳೂರಿನಿಂದ ದೆಹಲಿಗೆ ಪಾದಯಾತ್ರೆ ಹೊರಟಿದ್ದ ತಂಡದ ನೇತೃತ್ವ ವಹಿಸಿದ್ದವರು ಮೂಸಾ ಶರೀಫ್. ಅವರೊಂದಿಗೆ 55 ದಿನಗಳ ಕಾಲ ನಡೆದವರು ಉಪ್ಪಿನಂಗಡಿಯ ನೌಫಲ್. ಮತ್ತು 55 ದಿನಗಳ ಕಾಲ ವಾಹನದಲ್ಲಿ ಸಾಮಾನುಸರಂಜಾಮುಗಳನ್ನು ಹೇರಿಕೊಂಡು ಹಿಂಬಾಲಿಸಿದವರು ಹಮ್ಜಾ; ಉಪ್ಪಿನಂಗಡಿಯವರು. ಮಂಗಳೂರಿನ ಬಾಲಕೃಷ್ಣ ಮತ್ತು ಬೆಳ್ತಂಗಡಿಯ ಶುಕ್ರು ಇವರೊಂದಿಗೆ ವಾರಗಟ್ಟಲೆ ನಡೆದು, ಮತ್ತೆ ಊರಿಗೆ ವಾಪಸಾಗಿ ಮತ್ತೆ ಮೂರ್ನಾಲ್ಕು ದಿನಗಳ ನಂತರ ತಂಡವನ್ನು ಕೂಡಿಕೊಳ್ಳುತ್ತಿದ್ದರು. ಈ ಯಾತ್ರೆಗೆ ನೈತಿಕವಾಗಿ ಮತ್ತು ಆರ್ಥಿಕವಾಗಿ ಬೆನ್ನೆಲುಬಾಗಿದ್ದವರು ಪ್ರವೀಣ್ ಪೆರೇರ.

ದುರಂತಮಯ ದುರ್ಘಟನೆಯ ದಿನ ಲಿಂಗೇಗೌಡರು ಮತ್ತು ಮೂಸಾ ಶರೀಫ್ ಸ್ಥಳದಲ್ಲಿಯೇ ಮರಣಿಸಿದರೆ, ಬಾಲಕೃಷ್ಣ, ಪ್ರವೀಣ್, ಹಮ್ಜಾ ಮತ್ತು ನೌಫಲ್’ರಿಗೆ ಮಾರಣಾಂತಿಕ ಗಾಯಗಳಾಗಿವೆ. ಬಾಲಕೃಷ್ಣರ ಎಡಗಾಲಿನ ಮೂಳೆ ಮುರಿದಿದ್ದು, ಬಲಗಾಲಿನ ಪಾದಕ್ಕೆ ದೊಡ್ಡ ಗಾಯವಾಗಿದೆ. ಮೂರು ವಾರಗಳಿಂದ ಅವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಚೇತರಿಸಿಕೊಳ್ಳಲು ಇನ್ನೂ ಮೂರ್ನಾಲ್ಕು ತಿಂಗಳ ಕಾಲ ಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಪ್ರವೀಣ್ ಪೆರೇರಾರ ಎಡ ಮೊಣಕೈಯ ಮೂಳೆಗಳು ಜಜ್ಜಿಹೋಗಿದ್ದು, ಅವರ ಕೈಗೆ ರಾಡ್ ಹಾಕಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇವರ ಸೊಂಟಕ್ಕೂ ಏಟು ಬಿದ್ದಿದ್ದು, ಇವರೂ ಸುಧಾರಿಸಿಕೊಳ್ಳಲು ಎರಡುಮೂರು ತಿಂಗಳು ಬೇಕಿದೆ. ನೌಫಲ್’ರಿಗೆ ಆಂತರಿಕ ಗಾಯಗಳಾಗಿದ್ದು, ತಲೆಯಲ್ಲಿ ರಕ್ತ ಹೆಪ್ಪುಗಟ್ಟಿತ್ತು ಮತ್ತು ಎದೆಭಾಗದ ಕೆಲವು ಮೂಳೆಗಳಲ್ಲಿ ಹೇರ್ ಲೈನ್ ಫ್ರಾಕ್ಚರ್ ಆಗಿದೆ. ಈಗ ಅವರು ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಹಮ್ಜಾ ಅವರಿಗೂ ಗಂಭೀರ ಗಾಯಗಳಾಗಿದ್ದು, ಮೂರ್ನಾಲ್ಕು ಸಲ ಆಸ್ಪತ್ರೆಗಳಿಗೆ ಹೋಗಿಬಂದು, ನೆನ್ನೆ ತಾನೇ ಪುತ್ತೂರು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ.

ಇವರಲ್ಲಿ ಹಮ್ಜಾ ಬಿಟ್ಟರೆ ಮಿಕ್ಕವರೆಲ್ಲರೂ KRS ಪಕ್ಷದ ಸದಸ್ಯರು ಮತ್ತು ಪದಾಧಿಕಾರಿಗಳಾಗಿದ್ದವರು. ದೊಡ್ಡ ಆಶಯದೊಂದಿಗೆ ಪಕ್ಷದ ಬೆಂಬಲವನ್ನೂ ಬಯಸದೆ ಪಾದಯಾತ್ರೆ ಹೊರಟವರು. ಇವರ ಅಪೇಕ್ಷೆಯ ಮೇರೆಗೆ ಪಾದಯಾತ್ರೆಗೆ ನೈತಿಕ ಬೆಂಬಲ ನೀಡಲು ಲಿಂಗೇಗೌಡರು ಕೇವಲ ಎರಡು ದಿನಗಳ ಕಾಲ ಯಾತ್ರೆಯಲ್ಲಿ ಭಾಗವಹಿಸಲು ಗುಜರಾತಿಗೆ ಹೋಗಿದ್ದರು. ಅವರು ಅಲ್ಲಿಂದ ವಾಪಸು ಮರಳುವ ಮೊದಲು ಒಂದು ಕಡೆಯ ಫೇಸ್ಬುಕ್ ಲೈವ್ ಮಾಡೋಣ ಎಂದು ಹೆದ್ದಾರಿಯ ಬದಿಯಲ್ಲಿ ನಿಂತು ಮಾತನಾಡುತ್ತಿದ್ದಾಗ ಲಾರಿಯ ರೂಪದಲ್ಲಿ ದುರ್ವಿಧಿ ಹಿಂದಿನಿಂದ ಬಂದು ಇಬ್ಬರನ್ನು ಕೊಂದು, ನಾಲ್ವರ ಕೈಕಾಲು ಮುರಿಯಿತು.

ಮೃತ ಮೂಸಾ ಶರೀಫರ ಕುಟುಂಬದವರಿಗೆ ಸಾಂತ್ವನ ಹೇಳಲು ಮತ್ತು ಗಾಯಾಳುಗಳ ಯೋಗಕ್ಷೇಮ ವಿಚಾರಿಸಲು ನೆನ್ನೆಯ ದಿನ ನಾನು, KRS ಪಕ್ಷದ ರಾಜ್ಯ ಕಾರ್ಯದರ್ಶಿ ಎನ್. ಮೂರ್ತಿ ಮತ್ತು ಪಕ್ಷದ ರಾಜ್ಯ ಯುವಘಟಕದ ಕಾರ್ಯದರ್ಶಿ ವೆಂಕಟೇಶ್ ದಕ್ಷಿಣ ಕನ್ನಡ ಜಿಲ್ಲೆಗೆ ಹೋಗಿದ್ದೆವು. ನೆನ್ನೆ ಸಂಜೆ ಉಪ್ಪಿನಂಗಡಿ ಬಳಿಯ ಉರುವಲು ಪದವು ಗ್ರಾಮದಲ್ಲಿ ನೌಫಲ್’ರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದೆವು. ಎರಡೂವರೆ ವರ್ಷದ ಮಗುವಿನ ತಂದೆಯಾದ ನೌಫಲ್ ಇನ್ನೂ ಯುವಕ. ಬಡವ. ಇನ್ನೂ ಚಿಕ್ಕವಯಸ್ಸಿನ ನೌಫಲ್’ರ ಶ್ರೀಮತಿ, ತನ್ನ ಮಗುವಿನ ಜೊತೆಗೆ ಮಗುವಿನಂತೆಯೇ ಆಗಿರುವ ಗಂಡನ ಆರೈಕೆ ಮಾಡುತ್ತಿದ್ದಾರೆ. ಅವರಿಗೆ ನಮ್ಮ ಕೈಲಾದ ಸಹಾಯ ಮಾಡಿ, ಧೈರ್ಯ ಹೇಳಿ, ಅವರ ಕುಟುಂಬದ ಜೊತೆಗೆ ನಿಲ್ಲಲು ಗ್ರಾಮಸ್ಥರಿಗೆ ಕೋರಿದೆವು.

ನಂತರ ಬೆಳ್ತಂಗಡಿಯ ಬಳಿಯ ಮೂಸಾ’ರ ಮನೆಗೆ ಹೋಗಿ, ಅವರ ಮಕ್ಕಳ ಮತ್ತು ಆಪ್ತರ ಜೊತೆಗೆ ಮಾತನಾಡಿ, ಅವರಿಗೂ ನಮ್ಮ ಕೈಲಾದ ಸಹಾಯ ಮಾಡಿ ಸಾಂತ್ವನ ಹೇಳಿದೆವು. ಈ ಕಡುಕಷ್ಟದ ಸಮಯದಲ್ಲಿ ಅವರ ಆಪ್ತರು ಮತ್ತು ಊರಿನವರು ಮೂಸಾ’ರ ಕುಟುಂಬದೊಂದಿಗೆ ಗಟ್ಟಿಯಾಗಿ ನಿಂತಿರುವುದು ಸಮಾಧಾನಕರ ವಿಚಾರ.

ನಂತರ ನಾವು ಅಲ್ಲಿಂದ ಮಂಗಳೂರಿಗೆ ಹೊರಟು ಆಸ್ಪತ್ರೆಯಲ್ಲಿ ಬಾಲಕೃಷ್ಣರನ್ನು ಭೇಟಿ ಆದೆವು. ಬಾಲಕೃಷ್ಣರಿಗೆ ಮೂವರು ಮಕ್ಕಳು; ಮಗಳಿಗೆ ಮದುವೆ ಆಗಿದೆ; ಇಬ್ಬರು ಗಂಡುಮಕ್ಕಳು ದುಡಿಯುತ್ತಿದ್ದಾರೆ. ಬಾಲಕೃಷ್ಣರ ಹೆಂಡತಿ ಗಂಡನನ್ನು ಬಹಳ ಪ್ರೀತಿ ಮತ್ತು ಆಸ್ಥೆಯಿಂದ ನೋಡಿಕೊಳ್ಳುತ್ತಿದ್ದಾರೆ. ಆದರೆ ಬಾಲಕೃಷ್ಣರ ಬಲಪಾದದ ಪರಿಸ್ಥಿತಿ ಗಂಭೀರವಾಗಿದೆ. ಪಾದವನ್ನೇ ತೆಗೆಯಬೇಕಾಗುತ್ತದೆ ಎಂದಿದ್ದ ವೈದ್ಯರು ಈಗ ಕೊಳೆತಿದ್ದ ಮಾಂಸವನ್ನು ತೆಗೆದು ಚಿಕಿತ್ಸೆ ಮುಂದುವರೆಸಿದ್ದಾರೆ.

ಇಂದು ಬೆಳಗ್ಗೆ ಪ್ರವೀಣ್’ರನ್ನು ಅವರ ವಿಟ್ಲದ ಮನೆಯಲ್ಲಿ ಭೇಟಿ ಆದೆವು. ತಂದೆ, ತಾಯಿ ಮತ್ತು ನರ್ಸ್ ಆಗಿರುವ ಹೆಂಡತಿಯ ಶುಶ್ರೂಷೆಯಲ್ಲಿ ಪ್ರವೀಣ್ ಚೇತರಿಸಿಕೊಳ್ಳುತ್ತಿದ್ದಾರೆ.

ಕಾರಣಾಂತರಗಳಿಂದ ಮತ್ತೊಬ್ಬ ಗಾಯಾಳು ಹಮ್ಜಾ’ರನ್ನು ಭೇಟಿಯಾಗಲು ಆಗಲಿಲ್ಲ.

ಅಪಘಾತದಲ್ಲಿ ಮಾಡಿದ ಈರ್ವರೂ ಮೃತರಿಗೆ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ಅವರ ಕುಟುಂಬದವರಿಗೆ ತೀವ್ರ ಸಂತಾಪಗಳು. ಮೃತರ ಸಾರ್ಥಕ ಮತ್ತು ಸಾಹಸಮಯ ಬದುಕಿನ ನೆನಪಿನಲ್ಲಿ ಕುಟುಂಬಸ್ಥರು ಧೈರ್ಯದಿಂದ ಬದುಕು ಕಟ್ಟಿಕೊಳ್ಳುವಂತಾಗಲಿ ಎಂದು ಹಾರೈಸುತ್ತೇನೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಮತ್ತು ಅವರಿಗೆ ಮುಂದಿನ ಜೀವನವನ್ನು ಧೈರ್ಯದಿಂದ ಎದುರಿಸುವ ಶಕ್ತಿ ಲಭಿಸಲಿ ಎಂದು ಹಾರೈಸುತ್ತೇನೆ.

ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.

ಎಲ್ಲರಿಗೂ ಶುಭವಾಗಲಿ.

Leave a Reply

Your email address will not be published. Required fields are marked *