
ಆರೋಪಿಗಳ ವಿರುದ್ಧ ಕ್ರಮಕ್ಕೆ ಸೂಚನೆ
ಬೆಂಗಳೂರು, ಫೆ. ೧೧- ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಒಂದು ಸಮುದಾಯವನ್ನು ನಿಂದಿಸಿದ ಅವಹೇಳನಕಾರಿ ಪೋಸ್ಟ್ ಹಾಕಿದ್ದ. ಈತನನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
ಈ ವ್ಯಕ್ತಿಯನ್ನು ತಮ್ಮ ವಶಕ್ಕೆ ನೀಡಿ ನಾವು ಆತನಿಗೆ ಬುದ್ಧಿ ಕಲಿಸುತ್ತೇವೆ ಎಂದು ಒಂದು ಸಮುದಾಯದ ಜನರು ಉದಯಗಿರಿ ಪೊಲೀಸ್ ಠಾಣೆ ಮುಂದೆ ಗಲಾಟೆ ನಡೆಸಿದ್ದಾರೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಗಲಾಟೆ ನಡೆಸಿ ಕಲ್ಲು ತೂರಿದವರ ವಿರುದ್ಧವೂ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದರು.
ಘಟನಾ ಸ್ಥಳಕ್ಕೆ ಕಾನೂನು ಸುವ್ಯವಸ್ಥೆಯ ಎಡಿಜಿಪಿಯವರನ್ನು ಕಳುಹಿಸಿದ್ದೇನೆ. ಅವರು ಅಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಹಾಗೆಯೇ ಟಿ. ನರಸೀಪುರದಲ್ಲಿ ನಡೆದಿರುವ ಕುಂಭಮೇಳದ ಭದ್ರತೆಯನ್ನು ಇವರು ಪರಿಶೀಲಿಸಲಿದ್ದಾರೆ ಎಂದು ಹೇಳಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಮುಸಲ್ಮಾನರನ್ನು ತುಷ್ಟೀಕರಿಸುವ ನೀತಿಯಿಂದ ಈ ರೀತಿಯ ಘಟನೆಗಳಾಗುತ್ತಿವೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಗರಂ ಆದ ಅವರು, ಬಿಜೆಪಿಯವರು ಎಲ್ಲಾ ಸಂದರ್ಭದಲ್ಲೂ ಈ ರೀತಿ ಮಾತನಾಡುವುದು ಸರಿಯಲ್ಲ. ಹೀಗೆ ಮಾತನಾಡುವುದನ್ನು ಬಿಟ್ಟರೆ ಅವರಿಗೆ ಬೇರೆ ಅಜೆಂಡಾ ಇಲ್ಲ ಎಂದು ಕಿಡಿಕಾರಿದರು.
ಘಟನಾ ಸ್ಥಳಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಭೇಟಿ ನೀಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಅಶೋಕ್ ಭೇಟಿ ನೀಡಲಿ, ಯಾವ ಸಲಹೆ ಕೊಡುತ್ತಾರೋ ಅದನ್ನು ಪಾಲಿಸುತ್ತೇನೆ. ಯಾರೇ ಆಗಲಿ ಕಾನೂನನ್ನು ಕೈಗೆತ್ತಿಕೊಂಡರೆ ಅಂಥವರ ವಿರುದ್ದ ಕಠಿಣ ಕ್ರಮ ಕೈಗೊಂಡಿದ್ದೇವೆ. ಈ ಘಟನೆಯಲ್ಲಿ ಪೊಲೀಸರ ಲೋಪಗಳಿದ್ದರೆ ಅವರ ವಿರುದ್ಧವೂ ಕ್ರಮ ಆಗುತ್ತದೆ. ಈ ಹಿಂದೆಯೆಲ್ಲಾ ಪೊಲೀಸರ ವಿರುದ್ದವೂ ಕ್ರಮ ಆಗಿದೆ ಎಂದರು.
ರಾಜಣ್ಣ ದೆಹಲಿ ಭೇಟಿ ಗೊತ್ತಿಲ್ಲ
ಸಹಕಾರ ಸಚಿವ ರಾಜಣ್ಣನವರು ದೆಹಲಿಗೆ ಏಕೆ ಭೇಟಿ ನೀಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ, ಅವರನ್ನೇ ಕೇಳಿ. ನಾನು ದೆಹಲಿಗೆ ಹೋಗುವಾಗ ನಿಮಗೆ ಹೇಳಿಯೇ ಹೋಗುತ್ತೇನೆ. ೨ ದಿನದ ಹಿಂದೆ ಸಹ ನಾನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ್ದೆ.
ನಾವು ಸಚಿವರುಗಳಿದ್ದೇವೆ. ಹಾಗಾಗಿ ಭೇಟಿ ಮಾಡಿ ಮಾತನಾಡುವುದು ತಪ್ಪೇನಲ್ಲ. ಹೈಕಮಾಂಡ್ ಬಹಿರಂಗವಾಗಿ ಏನನ್ನು ಮಾತನಾಡಬೇಡಿ ಎಂದಿದೆ. ಹಾಗಾಗಿ ನಾವು ಬಹಿರಂಗವಾಗಿ ಏನನ್ನೂ ಮಾತನಾಡುತ್ತಿಲ್ಲ. ಸಭೆ ಸೇರುವುದು ಎಲ್ಲವೂ ನಡೆದಿದೆ. ಇದಕ್ಕೆಲ್ಲಾ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು.